Monday, September 3, 2018

ಮಾಧವನರಸಿಗೆ....



ಮಿಡಿವ
ಕೊಳಲಿನಂತರಾಳದಲ್ಲಿ
ರಾಧೆ ನಿನ್ನ ಹೆಸರು...
ಉಲಿವ
ನಲಿವ ಸಪ್ತಸ್ವರಗಳಲ್ಲಿ
ರಾಧೆ ನನ್ನ ಉಸಿರು...

ಯಮುನೆಯಾಳದಲ್ಲಿ
ಕಾಂಬ ಬಿಂಬದಲ್ಲಿ
ರಾಧೆ ನಿನ್ನ ಹೆಸರು....
ನದಿಯ ನಾದದಲ್ಲಿ
ಬೆರೆತು ಹೋಗುವಂತೆ
ರಾಧೆ ನನ್ನ ಉಸಿರು...

ಕುಣಿವ
ಹರಿಣ ಮೇಳದಲ್ಲಿ
ರಾಧೆ ನಿನ್ನ ಹೆಸರು...
ಸುಳಿವ
ಗಾಳಿ ಗಂಧದಲ್ಲಿ
ರಾಧೆ ನನ್ನ ಉಸಿರು...

- ಸಂಧ್ಯಾ ಕಾನತ್ತೂರು

Tuesday, July 31, 2018

ಬತ್ತದಲೆಗಳ ನಡುವೆ...

ನಿನ್ನ ಮೌನ ಅನು ಕ್ಷಣ ಕೊಲ್ಲುವುದೆನ್ನ,
ಭಾವನೆಗಳೂ, ತಲ್ಲಣಗಳೂ ಹೊಸದಲ್ಲವೆನಗೆ....
ಆಡಿದ ಮಾತುಗಳು ನಿನಗೆ ಮರೆತಿರಬಹುದು,
ಮರೆಯುವುದೆಂತು ನಾನು?
ಒಂದೊಮ್ಮೆ ನೀಡಿದ ವಚನಕ್ಕೆ ನಾನು ಬದ್ಧಳಾಗಿರುವೆ,
ಅರೆ ಕ್ಷಣಕ್ಕೂ ಬದಲಾಗದೆನ್ನ ಭಾವನೆ...
ಸದ್ದಾಗದಂತೆ ಸರಿದು ಹೋಗುವ ಯತ್ನವು ಬೇಡ,
ಮುರಿದು ಹೋಗುವ ಬಂಧವನು ದೇವ ಬೆಸೆಯುವವನಲ್ಲ...
ಮನದ ಮೂಲೆಯಲಿ ಎಂದಿಗೂ ಬತ್ತದು ಜೀವ ಸೆಲೆ,
ಕೊರಡಾಗುವೆನೆಂದರೂ, ಕುರುಡಾಗುವೆನೆಂದರೂ
ಬಿಡದೇ ಭೋರ್ಗರೆವ ಭಾವದಲೆ...

Sunday, June 24, 2018

ಮಳೆ ಎಂದರೆ...

ಸುರಿವ ಮಳೆಯಲ್ಲಿ ತಲೆಯ ತುಸುವೆ ಮೇಲೆತ್ತಿ,
ಮೋಡಗಳ ನೋಡುತ್ತ ಪ್ರಶ್ನಿಸಿದೆ ನಾನು...
ಮಳೆಯೆಂದರೆ ಆಕಾಶದ ಆನಂದಭಾಷ್ಪವೆನ್ನುತ್ತಾರೆ ಹೌದೇ?
ಎಲ್ಲಿಂದೆಲ್ಲಿಯ ಹೋಲಿಕೆಯೋ ಕಾಣೆ,
ಅತ್ತರೂ ನಕ್ಕರೂ ಸುರಿವುದು ಕಣ್ಣೀರೇ....
ಕಪ್ಪು ಕತ್ತಲೆ ಮೋಡವೊಂದು ಕಣ್ಸನ್ನೆ ಮಾಡಿ ಉತ್ತರಿಸಿತೆನಗೆ,
ದುಗುಡವರಿಯದ ಜನಕೆ ಅತ್ತರೂ ನಕ್ಕಂತೆ ತೋರುವುದು,
ದುಗುಡದಲಿ ಮುಳುಗಿದರೆ ನಕ್ಕರೂ ಅತ್ತಂತೆ....
ಅವರವರ ಭಾವದಂತೆ!
ಮಳೆಯೆಂದರದು ಭುವಿ ದಿವಿಯ
ಹೋಲಿಕೆಯಿಲ್ಲದ ಸಂಬಂಧ...
ಇಲ್ಲಿ ಹುಟ್ಟಿ ಅಲ್ಲಿಯವರೆಗೆ ಸಾಗಿ...
ಮತ್ತೆ ಹಿಂತಿರುಗಿದ ಭೂಮಿತಾಯಿಯ ಮಗು ಮಳೆಯೆನ್ನಬಹುದೇ!?
ಮುಗಿಯದ ಪಯಣದಲಿ,‌
ಆತ್ಮ ಪರಮಾತ್ಮಗಳ ಜಿಜ್ಞಾಸೆಯಲಿ ಮುಳುಗೇಳುವಾಗ
ಇನ್ನೂ ಅದೇನೋ ಗೋಚರವಾಗುವುದೇ!!

Thursday, June 21, 2018

ನನ್ನ ಅಪ್ಪ

ನನ್ನ ಹುಟ್ಟು ಸಂಭ್ರಮವ ಕೊಟ್ಟಿತ್ತೋ...ಅರಿಯೆ!
ಇರಬಹುದು ಹೆಣ್ಣೆಂದು ಒಂದಿನಕ್ಕೂ ಕಡೆಗಣಿಸಿದವನಲ್ಲ...
ನನ್ನಪ್ಪ ನನ್ನ ಯಾರಿಗೂ ಹೋಲಿಸಲಿಲ್ಲ;
ಹಲವು ತೊಂದರೆ ಸಂಕಷ್ಟಗಳ ಸಹಿಸಿದವ...
ನನ್ನ ತನ್ನ ಬೆನ್ನಿಗೆ ಕಟ್ಟಿಕೊಂಡೇ ತೋಟ ಗದ್ದೆ ತಿರುಗಿದವ....
ಚಂದಮಾಮದ ಚಂದಕಥೆಗಳ ಇನ್ನಷ್ಟು ಚಂದಗೊಳಿಸಿ ಹೇಳಿದವ ನನ್ನಪ್ಪ....
ಓದುವ ಗೀಳು ಹತ್ತಿಸಿದವ, ಕಾವ್ಯಗಳ ರುಚಿ ಹತ್ತಿಸಿದವ...
ಕತೆಗಳ ಬೆನ್ನು ಹತ್ತಿ ಓದಿಸಿದವ...
ನನ್ನಲ್ಲಿ ಚಿಂತನೆಗಳ ಬಿತ್ತಿದವ ಅಪ್ಪ...
ತನ್ನ ಮೆಚ್ಚಿನ ಹವ್ಯಾಸಗಳಿಗೆಲ್ಲ ನನ್ನ ಸಹಾಯಕಳಾಗಿಸಿ ಹಲವು ಕೆಲಸಗಳ ಕಲಿಸಿದವ...
ನನ್ನ ಧೈರ್ಯವ ಮೆಚ್ಚಿ ಝಾನ್ಸೀ ರಾಣಿ  ಎಂದು ಕರೆದವ....
ಸ್ವತಂತ್ರ ಚಿಂತನೆಗೆ, ಸ್ವತಂತ್ರ ಓಡಾಟಕ್ಕೆ ಕಾರಣವಾದವ ಅಪ್ಪ...
ಮಡಿಲಲ್ಲಿ ಕುಳ್ಳಿರಿಸಿ ಕರೆದೊಯ್ದ ಮರೆಯಲಾರದ ಪಯಣಗಳು ಅದೆಷ್ಟೋ ಇದ್ದರೂ...
ಜಗತ್ತಿನ ಹುಚ್ಚು ಪ್ರವಾಹದಲ್ಲಿ ಈಜಾಡಿ ದಡ ಸೇರುವ ಕಸುವು ನನ್ನಲ್ಲಿದೆ ಎಂದು ಭರವಸೆಯಿಟ್ಟವನು ಅಪ್ಪ...
ಹೆಜ್ಜೆ  ಹೆಜ್ಜೆಗೂ ಹೆಮ್ಮೆ ಪಟ್ಟವನು...
ಉಟ್ಟ ಬಟ್ಟೆ ಮಾಸಿದ್ದರೂ..‍
ಆತ್ಮವಿಶ್ವಾಸ ಪ್ರಕಾಶಿಸುವಂತೆ ಮಾಡಿದವನು...
ಹೋಲಿಕೆ ಇರದ ಬಾಲ್ಯವ ಕೊಟ್ಟವನು ಅಪ್ಪ....



ವಿಶ್ವ ಅಪ್ಪಂದಿರ ದಿನ - ವಿಶ್ವ ಅಮ್ಮಂದಿರ ದಿನ ಎಂಬ ಪಾಶ್ಚಾತ್ಯ ಆಚರಣೆ ಒಪ್ಪದ ನನಗೆ ಜನ್ಮವಿತ್ತವರೆಂದರೆ ನಿತ್ಯ ನೆನಪಿಸಿಕೊಳ್ಳಬೇಕಾದವರು...

ಮಳೆ ಮತ್ತು ಕಣ್ಣೀರು

ಸುರಿವ ಮಳೆಯಲ್ಲಿ ನಿಂತು ನನ್ನ ನಾ ಮರೆಯ ಬೇಕು; ಕರಗಿದ ಕಾರ್ಮೋಡದಂತೆಲ್ಲ ಮುನಿಸುಗಳು ಕರಗಿ
ಮಳೆಯಾಗಿ ಸುರಿಯಬಾರದೇನು...
ಮಳೆಹನಿಯ ಧಾರೆಯ ನಡುವೆ ಹನಿದ ಕಂಬನಿ ಮರೆಯಾಗಿ,
ಎದೆಯ ತಳಮಳವೆಲ್ಲ ಗುಡುಗಿನಳೊಂದಾಗಿ!!
ಬಿರಿದ ಬಾನದು  ನೆಲ ಮುಗಿಲ ಸೇತುವಾದಂತೆ,
ಹೃದಯ ಬೇಗುದಿಯೆಲ್ಲ ಕಣ್ಣೀರಾಗಿ ಚಿಮ್ಮಿತಂತೆ...
ಮಲೆನಾಡಿನ ಮಳೆಗೂ, ನನ್ನ ಕಂಬನಿಗೂ ಒಂದೇ ಹೋಲಿಕೆ,!!
ಎಷ್ಟು ಸುರಿದರೂ ಸುಸ್ತಿಲ್ಲವಂತೆ...!!!

Wednesday, June 20, 2018

ಬದುಕೇ ಯಾಕೆ ನೀ ಹೀಗೆ?

ಬಹಳ ಸತಾಯಿಸುತ್ತದೆ ಈ ಬದುಕು,
ಕಡಲ ತೀರದಲಿರಲು ಅಲೆಗಳು ಕಾಲ ಚುಂಬಿಸಿ ಮರಳಿ ಹೋದಂತೆ...
ಬೇಡವೆಂದುಕೊಂಡಷ್ಟೂ ಬಡಿದೆಬ್ಬಿಸುವ ಬೆಳಗುಗಳು...
ದಾರಿಯುದ್ದಕ್ಕೂ ಕಾಡುವ ಕುಹೂ ನಾದ....
ಈ ನಿದ್ದೆ ನಿರಂತರವಾಗಿರಲೆಂಬ ನಿತ್ಯ ಬಯಕೆ ಮನಕೆ;
ಬಂದ ಅಲೆ ಕೊಚ್ಚಿ ಕೊಂಡೊಯ್ಯಬಾರದೇ ನನ್ನ !?
ಕಾಲ ಕೆಳಗಿನ ಮರಳ ಕಣವಷ್ಟೇ ಬೇಕೆ ನಿನಗೆ?
ಇಂಚಿಂಚೂ ಒಳ - ಹೊರಗನ್ನು ಬಿಡದೆ ದಹಿಸುವ ಸೂರ್ಯ....
ಇಹಕೊಂದು ಪರಕೊಂದು ರೂಪವೇ ನನಗೆ!?
ನಿಟ್ಟುಸಿರ ಭಾವಗಳು ಯಾರನೂ ಯಾಕೋ ಇನಿತೂ ಸೋಕಲಾರವು...
ಭಾವಜೀವಕೆ ಭಾರವೀ ಬದುಕು!!!!

Wednesday, June 13, 2018

ಜೀವನ್ಮಿತ್ರನಿಗೆ

ಆಗ ನನಗಿದ್ದದ್ದು ಬರಿಯ ಕುತೂಹಲ....
ಕುತೂಹಲಕ್ಕೆ ಪ್ರೇಮವೆಂದು ಕರೆಯಬಹುದೇ?
ಪ್ರೇಮ ಕುರುಡೆನ್ನುತ್ತಾರೆ, ನಿಜವೇ!?
ಆದರೆ ಕುತೂಹಲಕ್ಕೆ ಮೈಯೆಲ್ಲ ಕಣ್ಣು - ಕಿವಿ - ಮೂಗು....
ನಾನು ನಿನ್ನೆಡೆಗೆ ನೋಡಿದ್ದು ಬೆರಗಿನಿಂದ;
ಕೋರೈಸಿದ ಬೆಳಕಿಗೆ ಕಣ್ಣು ಮುಚ್ಚಿತ್ತು.
ಮತ್ತೆ ಮತ್ತೆ ದ್ವಂದ್ವಗಳು,
ಪ್ರೇಮ ಕುತೂಹಲಗಳೆರಡೂ ಹೊಂದಿಕೊಳ್ಳುತ್ತಿಲ್ಲ;
ಕುತೂಹಲ ಕಿವಿ ನಿಮಿರಿಸಿ ಕುಳಿತಿದೆ....
ಕೇಳಿದ್ದು ಮಾತಿಗಿಂತಲೂ ಲಬ್ ಡಬ್... ಹೃದಯ ಬಡಿತ!
ಕುತೂಹಲದಿಂದ ಆಘ್ರಾಣಿಸಿದೆ
ಬರಿ ಮೈಯ ಗಂಧ - ಸುಗಂಧ!
ನಾನೊಪ್ಪಿಕೊಂಡೆ ಆ ಕ್ಷಣವೇ...
ನನ್ನ ಪ್ರೇಮ ಕುತೂಹಲವನ್ನೂ ಮೀರಿ ನಿಲ್ಲುತ್ತದೆ...
ಜೀವನಪೂರ್ತಿ ನಿನ್ನನಪ್ಪಿಕೊಂಡೆ...
ನಿನ್ನ ಅಂತರಂಗ ನನಗಷ್ಟೇ ತಿಳಿಯುತ್ತದೆ.

Friday, June 8, 2018

ಯೋಚನೆಗೆ ಧ್ವನಿಯಿಲ್ಲ ಎಂದದ್ದು ಯಾರು?

ನಾನು ದೂರ ಸರಿದಷ್ಟೂ ನೀನು ಹತ್ತಿರವಾಗುತ್ತಿ
ನಿನಗೆಲ್ಲಿಂದ ಬಂತೀ ಆಕರ್ಷಣ ಶಕ್ತಿ?

ನೀ ಹತ್ತಿರ ಬಂದಷ್ಟೂ ಕೋಪ ನನಗೆ,
ಸತಾಯಿಸಲೆಂದಲ್ಲ; ಏನೋ ಜಡತೆ!

ನಿನ್ನ ಪ್ರೀತಿ ಕೋಪವನ್ನೂ ಮರೆಸುತ್ತದೆ...
ನಿನ್ನೊಂದಿಗೆ ನಾ ಕೋಪಿಸಿಕೊಂಡದ್ದಾದರೂ ಹೇಗೆ?

ನಿನ್ನ ಮಾತು ಮೀರಬಾರದು ; ನೀ ಹೇಳಿದ್ದಲ್ಲ!
ನನಗೆ ನಾನೇ ಹಾಕಿಕೊಂಡದ್ದು ; ನಿಯಮ!

ನಾವಿಬ್ಬರೂ ಜೊತೆಯಲ್ಲೇ ನಡೆಯುತ್ತಿದ್ದೇವೆ,
ಎಣಿಕೆ ತಪ್ಪೆನಿಸಿದರೂ , ನಮಗಿಬ್ಬರಿಗೂ ಸೇರಿ ಎರಡೇ ಕಾಲು!

ನೀನು ಯೋಚಿಸಿದ್ದು ನನಗೂ ಕೇಳಿಸುತ್ತದೆ,
ಯೋಚನೆಗೆ ಧ್ವನಿಯಿಲ್ಲ ಎಂದದ್ದು ಯಾರು?