Wednesday, April 14, 2021

ಗಾವೋ ವಿಶ್ವಸ್ಯ ಮಾತರಃ

 ಸಪ್ತಗಿರಿವಾಸನ ಜಗಕೆ ತೋರಿದಾಕೆ

ಜಗವ ರಕ್ಷಿಪನ ಹಾಲಿತ್ತು ಪೊರೆದಾಕೆ

ಜೀವಜಗದಮಾತೆಯೀಕೆ-ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ


ದೊರೆ ದಿಲೀಪಗೆ ಸಂತತಿಯ ವರವಿತ್ತು ಹರಸಿದಾಕೆ

ಧೇನು ರೂಪಕೆ ನಂದಿನಿಯೆಂಬ ನಾಮ ಸಾಕೇ!?

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ


ಕೌಶಿಕಗೆ ಗುರುಪಾದ ತೋರಿದವಳೀಕೆ

ದೊರೆಯ ಭವಸಾಗರವ ದಾಟಿಸಿದಾಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ

 

ಪಾಯಸದಿ ಕೌಸಲ್ಯೆಗೆ ರತ್ನವ ಪುತ್ರನಾಗಿತ್ತವಳು

ಫಾಲಲೋಚನನ ಸಂಚಾರಕೆ ಸಂತಾನವನೆ ಇತ್ತವಳು..

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ


ಪಾಲ್ಗಡಲಲಿ ಬ್ರಹ್ಮತೇಜದಿ ಜನಿಸಿದಾಕೆ

ಪಾಲ್ಗಡಲೊಡೆಯನೆ ಪಾಲಕನಾಗಿಹ ಸುರಧೇನು ಸುರಭಿಯೀಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ

 

ಸತ್ಯದಿಂದಲೇ ಅರ್ಬುತವ್ಯಾಘ್ರನ ಮಣಿಸಿದಾಕೆ

ನಮ್ಮನೆಲದವಳೀಕೆ ಪುಣ್ಯಕೋಟಿ ಹೆಸರಿನಾಕೆ

ಜೀವಜಗದಮಾತೆಯೀಕೆ -  ಅನ್ಯಮಾತೇಕೆ!?

ಗಾವೋ_ವಿಶ್ವಸ್ಯ_ಮಾತರಃ

 

ಸಾವಿರಕರಗಳ ಶೂರನ ಹಸಿವನು ನೀಗಿದಳೀಕೆ!

ಮದಿಸಿದ ಕ್ಷತ್ರಿಯ ಕುಲಕೆ ಕೊಡಲಿಯೆ ಆದವಳಾಕೆ!

ಜೀವಜಗದ ಮಾತೆಯೀಕೆ-

ಅನ್ಯ ಮಾತೇಕೆ!? ಗಾವೋ_ವಿಶ್ವಸ್ಯ_ಮಾತರಃ


ಬೃಂದಾವನದಲಿ ನಂದನ ಕಂದನ ಪೊರೆದವಳು!

ಗಿರಿಧಾರಿಯು ಸಖಿಯೊಡನಿರೆ ಜೊತೆಗೂಡಿದಳು!

ಜೀವಜಗದಮಾತೆಯೀಕೆ-ಅನ್ಯಮಾತೇಕೆ?

ಗಾವೋ_ವಿಶ್ವಸ್ಯ_ಮಾತರಃ



ಕರುಳಕುಡಿಯ ಕೊಲೆಯಾಗಿರಲು ನ್ಯಾಯಗಂಟೆಯನೆಳೆದಳೀಕೆ

ನ್ಯಾಯದೇವತೆಗೆದುರು ನಿಂದು ವಾತ್ಸಲ್ಯಧಾರೆ ಹರಿಸಿದಾಕೆ

ಜೀವಜಗದ ಮಾತೆಯೀಕೆ-ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ನಹುಷಗೆ  ಋಷಿ ಮುನಿಗಳ ಗರಿಮೆಯ ಅರುಹಿದಳೀಕೆ

ಸಂತರ ಸರಿಸಾಟಿಯು ಜಗದೊಳು ಇವಳೊಬ್ಬಾಕೆ

ಜೀವಜಗದ ಮಾತೆಯೀಕೆ- ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಪರತಂತ್ರದ ಸಂಕಲೆ ಕಿತ್ತೆಸೆದ

ತ್ಯಾಗಮಯಿಯಾಕೆ.

ಧಮನಿಗಳಲೆಚ್ಚರ ಚಿಮ್ಮಿಸಿ ದೇಶಕೆ ಮಂಗಲವಿತ್ತವಳೀಕೆ..

ಜೀವಜಗದ ಮಾತೆಯೀಕೆ-ಅನ್ಯಮಾತೇಕೆ!? 

ಗಾವೋ_ವಿಶ್ವಸ್ಯ_ಮಾತರಃ


ಸೃಷ್ಟಿ ಸ್ಥಿತಿ ಲಯ ಸ್ವರೂಪಿಯ ಹಿಂದೆ 

ನೆಲೆಸಿದಳೀಕೆ

ಮಂತ್ರಾಲಯ ಕ್ಷೇತ್ರಕೆ ಕಾಮಧೇನುವೆಂಬ 

ಹೆಸರಿತ್ತಾಕೆ.

ಜೀವಜಗದ ಮಾತೆಯೀಕೆ-ಅನ್ಯ ಮಾತೇಕೆ? 

ಗಾವೋ_ವಿಶ್ವಸ್ಯ_ಮಾತರಃ


ಜನಕಸಭೆಯಲಿ ಯಾಜ್ಞವಲ್ಕ್ಯರ ವಿದ್ವತ್ತಿಗೆ ಒಲಿದವಳೀಕೆ.

ಮುಗುದೆ ಕಾತ್ಯಾಯಿನಿಯ ಸಾವಿರ ಕನಸುಗಳ ನನಸಾಗಿಸಿದಾಕೆ.

ಜೀವಜಗದ ಮಾತೆಯೀಕೆ-‌ಅನ್ಯ ಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಸಕಲ ಚರಾಚರಗಳ ಪೊರೆಯುವ

ವಿಶ್ವ ಜನನಿಯೀಕೆ

ಸತ್ಯವಂತ ಜಾಬಾಲಿಗೆ ಬ್ರಹ್ಮ ಜ್ಞಾನವ

ಕರುಣಿಸಿದಾಕೆ...

ಜೀವಜಗದ ಮಾತೆಯೀಕೆ - ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ


ಶ್ರೀ ಗುರು ರಾಘವೇಶ್ವರ ಪಾಲಿತಳೀಕೆ

ಕರುಣಾಪೂರ್ಣರ ಉಸಿರಾಗಿಹಳೀಕೆ

ಜೀವಜಗದ ಮಾತೆಯೀಕೆ - ಅನ್ಯಮಾತೇಕೆ? ಗಾವೋ_ವಿಶ್ವಸ್ಯ_ಮಾತರಃ