Monday, January 27, 2014

ಜೀವ ಜಾತ್ರೆ (೧೯೯೯ ರ ಕವನ )

ಎಲ್ಲೋ  ಆದಿ ಎಲ್ಲೋ ಅಂತ್ಯ 
ಸಾಗುತಿಹುದು ಯಾತ್ರೆ 
ಹತ್ತು ರೀತಿ ಹಲವು ಭ್ರಾಂತಿ 
ಇದೇ ಜೀವ ಜಾತ್ರೆ !

ಅಲ್ಲೊಂದು ಕುಸಿತ ಇಲ್ಲೊಂದು ನೆಗೆತ 
ಸೃಷ್ಟಿಯ ಚಮತ್ಕಾರ,
ಶಿಶಿರದಿ ಚೈತ್ರದಿ  ಎಲ್ಲಿಯೂ ನಿಲ್ಲದು 
ಕಾಲನ  ಗಡಿಯಾರ!!!

ಹಗಲು ಸಂದರೆ ಇರುಳು ಬಂದರೆ 
ಅಳುವುದೇತಕೆ ಬಿಕ್ಕಿ.... 
ನೋವು ಮರೆಸಿ ಕನಸು ಧರಿಸಿ 
ಕರೆಯುತಿಹುದು ಚುಕ್ಕಿ !
 

Thursday, January 9, 2014

ಕಾಲ ಮತ್ತು ಅತ್ತೆ

ಮಾವ ಒಳ್ಳೆಯ ಮನುಷ್ಯನಾಗಿದ್ದನಾ?
ಈ ನನ್ನ ಸಂಶಯಕ್ಕೆ ಉತ್ತರವಿಲ್ಲ ಬಿಡಿ,
ಅತ್ತೆಯೋ ಪತಿವ್ರತಾ ಶಿರೋಮಣಿ..
ಮಾವ ಹೇಳಿದ ಸುಳ್ಳು ಕಥೆಗಳಿಗೆ ತಲೆದೂಗಿ,
ಅತಿ ರಂಜನೆಗೆ ಮಾರು ಹೋದ ಮುಗ್ಧೆ ....

ಮಾವ ಮನೆ ಹೊರಟರೆ ಹೊಲ-ಗದ್ದೆ ಸುತ್ತಿ,
ಬೈಲಾಚೆ ಒಕ್ಕಲು ಮನೆಯ
ಜಗಲಿ ಹತ್ತಿ ಹರಟೆ ಹೊಡೆದು,
ಅಲ್ಲೊಂದಿಷ್ಟು ಕಥೆ ಹೇಳಿ ಮನೆಗೆ ಬಂದಾಗ-
ದೇವರ ಮುಂದಿನ ನಂದಾ ದೀಪದ
ಬತ್ತಿ ಸರಿ ಮಾಡುತ್ತಿದ್ದರು ಅತ್ತೆ,
ಮಿಂದು ಮಡಿಯುಟ್ಟು, ದೊಡ್ಡ ಕುಂಕುಮದ ಬೊಟ್ಟಿಟ್ಟು ,
ಬೇಲಿಯ ಹೂ ಮೊಗ್ಗುಗಳ ಮಾಲೆ ತುರುಬಿಗಿತ್ತು
ಪಟ್ಟೆ  ನೂಲಿನ ತುದಿಯ ತಾಳಿ  ಸೆರಗಲಡಗಿತ್ತು..

ಅತ್ತೆಯೆಂದರೆ ನಮಗೆಲ್ಲ
ಹಳ್ಳಿ ಮನೆಯ ಗೊಡ್ಡು ಸಂಪ್ರದಾಯಸ್ಥೆ ,
ಮಾವನಿಗೆ ಕಚ್ಚಿದ್ದು ಹಾವು ,
ಮೈಯೆಲ್ಲ  ವಿಷ ಹರಡಿ - ನೆತ್ತಿವರೆಗೇರಿದಾಗ,
ಅತ್ತೆಯ ಬಗ್ಗೆ ಚಿಂತಿಸಿ,
ತಲೆ ಕೆಡಿಸಿ ಕೊಂಡವರು ನಾವು,

ಕಾಲವೆಂಬುದು ಸತ್ಯವನೆದುರಿಸುವ ಪಾಠ
ಕಲಿಸುತ್ತದೆಂಬ ಸತ್ಯ ತಿಳಿದದ್ದು ,
ಅತ್ತೆಯ ಕಂಡಾಗ,
ಪಟ್ಟೆ ನೂಲಿಲ್ಲ ಕತ್ತಲ್ಲಿ ,
ಕುಂಕುಮವಿಲ್ಲ ಹಣೆಯಲ್ಲಿ,
ಬದಲಿಗೆ,
ಕರಿಮಣಿಯ ಸರವಿತ್ತು, ಹಣೆಯಲ್ಲಿ ಸ್ಟಿಕ್ಕರ್ ಬೊಟ್ಟು..