Saturday, September 30, 2017

ಕೋರಿಕೆ

ಕೋರಿಕೆ

ನನ್ನಂತರಾಳದ ನೋವುಗಳೇ
ಬೇರು ಬಿಟ್ಟು ಬೆಳೆಯುವಿರೇಕೆ?
ಉಳಿಯಬಾರದೇ ಬೊನ್ಸಾಯಿಗಳಾಗಿ-
ಹೇಳಿ ನೋವುಗಳೇ-
ಮೌನತಾಳುವಿರೇಕೆ?
ಎಲ್ಲಿವೆ ಬಿಕ್ಕುಗಳು?
ಕಣ್ಣೀರ ಹನಿಗಳು!
ಉಳಿದು ಬಿಡಿ ನನ್ನೊಳಗೇ...
ಚಾಚದಿರಿ ಸುತ್ತ ಮುತ್ತ ರೆಂಬೆ-ಕೊಂಬೆ

Tuesday, September 26, 2017

ಮೌನಹಿಮ ಕರಗುವ ಹೊತ್ತು

ಮೌನಹಿಮ ಕರಗುವ ಹೊತ್ತು

ಒಡಹುಟ್ಟಲ್ಲ, ಒಡಲಲ್ಲಿ ಹುಟ್ಟಿಲ್ಲ!
ಒಡನಾಟವಿಲ್ಲ... ಒಡನಾಡಿಯಲ್ಲವೇ ಅಲ್ಲ...
ಮೌನ ಗರ್ಭದಲಿ ಹುಟ್ಟಿ ಬಂತೊಂದು ಬಂಧ...
ಹಿಮಮೌನವ ಕರಗಿ ನೀರಾಗಿಸುತ...
ನೀರೊಮ್ಮೆ ಕುದಿಕುದಿದು ಆವಿಯಾಗಿ... ಮೋಡವಾಗಿ
ಗುಡುಗು ಸಿಡಿಲು ಮಿಂಚುಗಳೊಡನೆ
ಭೋರ್ಗರೆವ ಮಳೆಯಾಗಿ
ಇಳೆಯ ತೋಯಿಸುವುದು...
ಆಕಾಶದ ಹರ್ಷವೆನ್ನುವರು ಕೆಲವರದರ....
ನಾ ಹೇಳಲೇ,
ಇದು ಅದಲ್ಲ...
ಇದು ಅದಲ್ಲವೇ ಅಲ್ಲ...
ಭೂಮಿಯೊಡಲಿಂದ ಆವಿಯಾಗಿ ಹುಟ್ಟಿದ ಮೋಡ
ಅದು ಭೂಮಿಯದೇ ಕಂದ....
ಸುರಿವ ಹನಿಹನಿಯಲ್ಲೂ
ಸಿಟ್ಟು ಸೆಡವು ಆಕ್ರೋಶದ ಕೊನೆಗೆ ಬರುವ ಭಾವೋತ್ಕರ್ಷದ ವರ್ಷ...
ಹಿಮಮೌನವು ಕರಗುವ ಹೊತ್ತು...
ಮಾತೆ ಮಾತು ಮರೆಯುವಳು...
ಕೇಳುವ ಕಿವಿ ಮೈತುಂಬ ತೆರೆದಿಟ್ಟು....

Tuesday, September 19, 2017

ಬರುವುದಾದರೆ ಬಾ


ಬರುವುದಾದರೆ ಬಾ
ತೆರೆದ ಮನಸಿದೆ, ಕನಸು ಸೊಗಸಿದೆ..
ದೂರದಿಂದಲೆ ಮಾತು ಏನದು ಆಡಿದೆ?
ಕಣ್ಣು ಮೌನವ ಮೀರಿದೆ, ಅಂತರಾಳವ ಅರುಹಿದೆ
ಮನವು ಬಿರಿದಿದೆ, ಕಂಪು ಸೂಸಿದೆ
ಹರ್ಷ ಚೆಲ್ಲಿದೆ ಮಲ್ಲಿಗೆ
ನೀಲ ನಭದಲಿ ಚುಕ್ಕಿ ಹೊಳೆದಿದೆ, ನನ್ನ ಆಸೆಯ ಕರೆಯಿದೆ
ಕನಸು ಹಸುರಿದೆ, ಹೃದಯ ಕಾದಿದೆ,
ನಗೆಯ ಹಾಸಿದೆ ಹುಣ್ಣುಮೆ.
ಬಿಂಕ ತೋರದೆ ನೀನು ಬಂದರೆ....
ಸ್ವರ್ಗ ಭೂಮಿಗೆ ಇಳಿಯದೇ!?
ದೂರದಿಂದಲೇ ಮಾತು ಏನದು ಆಡಿದೆ!?

Sunday, July 9, 2017

*ಭಕ್ತಿ ನಮನ*
ಜ್ಞಾನ ಜ್ಯೋತಿಯಿಂದ ಬೆಳಗುತಿರುವ ಮೂರುತಿ|
ಶಿಷ್ಯ ಕೋಟಿಗೆಲ್ಲ ನಿಮ್ಮ ನುಡಿಯೇ ಸ್ಫೂರ್ತಿ||ಶರಾವತೀ ತೀರದಲ್ಲಿ ನಿಮ್ಮ ವಾಸವು|
ಕತ್ತಲೆಯ ನೀಗುವಂಥ ಮಂದಹಾಸವು|
ತುಂಗೆಯ ನೀರಿನಲ್ಲಿ ಕಾಣ್ವ ಬಿಂಬವು|
ಗಂಗೆಯ ಸ್ನಾನದಂತೆ ನಿಮ್ಮ ಸ್ಮರಣೆಯು.||
ಮುಷ್ಠಿ ಅಕ್ಕಿಯಿಂದ ಜನರ ಹಸಿವು ನೀಗಿತು|
ಒಡೆದ ಬಳಗ   ಬಿರುಕು ಮುಚ್ಚಿ ಭದ್ರವಾಯಿತು|
ನಮ್ಮ ನೆಲದ ಗೋವು ತಳಿಯು ವೃದ್ಧಿಯಾಯಿತು|
ನಿಮ್ಮ ಕೃಪೆಯು ನಮಗೆ ದಾರಿ ದೀಪವಾಯಿತು||
ನಿತ್ಯ ನಿಮ್ಮ ನೆನೆವೆ ಸ್ವಾಮಿ ರಾಘವೇಶ್ವರ|
ಸ್ಮರಣೆ ಮಾತ್ರದಿಂದ ದುರಿತವೆಲ್ಲ ದೂರ|
ನಿಮ್ಮ ಮಹಿಮೆ ಅರಿತು ನಾವು ನಿತ್ಯ ಭಜಿಪೆವು|
ಭಕ್ತಿ ಮಾರ್ಗದಲ್ಲೇ ಸರ್ವ ಸುಖವ ಕಾಣ್ವೆವು||
ಸದಾ ನಿಮ್ಮ ಕೃಪೆಯ  ಬೇಡ್ವೆ
ಗುರುವೇ ವಂದನೆ|
ತೊದಲು ಭಕ್ತಿ ಕುಸುಮವಿದು
ಗುರುವಿಗರ್ಪಣೆ||

Thursday, May 18, 2017

ಮೌನ - ಸಾಗರ

ಭೂಮಿಯ ಮೌನಕ್ಕೆ
ಆಕಾಶ ಮಾತಾಗಿದೆ...
ಸುರಿವ ಮಳೆಯಂತೆ
ನೆನಪುಗಳೂ...
ಗುಡುಗಿನಬ್ಬರವಿಲ್ಲ, ಹಿತವಾದ ಮಾರುತ..
ಹನಿ‌ಹನಿಯಲ್ಲೂ ಅಲ್ಲೆಲ್ಲೋ ನಿನ್ನ ಕಾಯುತ್ತ ಕೊಡೆಯಿದ್ದರೂ ನೆನೆದ ನೆನಪಿನ ತಂಪು ಮಣ್ಣಿನ ಕಂಪು..
ಕಣ್ಣು ನೆಟ್ಟಷ್ಟೂ ದೂರ ಸಮುದ್ರ,
ಸಾಗರದಲೆಗಳಲಿ ಕಳೆದು ಹೋಯಿತೇ
ನೂರು ನೋವುಗಳು..‌
ತೆರೆ ತೆರೆದು ತಬ್ಬಿ ನಿಂತಿತೇ ಮೌನವ
ಮೀರದಂತೆ ಕಣ್ಣೀರು ಕಾಣದಂತೆ...

ಮೌನ ಬಿಂಬಕ್ಕೊಂದು ಮಾತು

ಮನದ ಕನ್ನಡಿಯಲ್ಲಿ
ಕಂಡ ಬಿಂಬ
ಮರೆಯಾಗದೆಂದೂ...
ಬದಲಾಗದೆಂದೂ...
ಮೌನವೇ ನನ್ನ ಬಳಿ
ಮಾತಾಗುವುದು...
ಮೌನಕ್ಕೆ ಅರ್ಥ ಹುಡುಕಲಾರೆ
ಮೌನ ಮೀರುವ ಮುನ್ನ
ನಕ್ಕು ಬಿಡು ನನ್ನ ನೋಡಿ...
ನಕ್ಕಂತೆ ನಟಿಸದಿರು..
ದುಃಖಕ್ಕೂ ಮೌನಕ್ಕೂ ನಂಟು ಬಹಳ!
ಎರಡು ದೋಣಿಗಳು ಜೊತೆಯಾಗಿ
ಚಲಿಸಿ ಗಮ್ಯವನು ಸೇರಿದಂತೆ...
ಬಾಳ ಪಯಣದಲು ಸಹಜವೀ ಅಂತರ
ಮೌನ...ಪರಿತಾಪ...

Wednesday, February 8, 2017

ಮೌನ ಕೋಣೆಯ ಮಾತು

ನಾನೊಬ್ಬಂಟಿ; ಕುಳಿತದ್ದು ನಾಲ್ಕು ಗೋಡೆಗಳ ನಡುವೆ.
ಗೋಡೆಗಳಿಗೂ ಕಿವಿಯಿದ್ದಂತೆ,ಬಾಯಿಲ್ಲವೆಂಬ ನಿಶ್ಚಿಂತೆ!
ನಿನ್ನ ಬರುವಿಕೆಗಾಗಿ ಚಡಪಡಿಸುತ್ತದೆ ಮನಸ್ಸು.
ಬರಬೇಕಷ್ಟೆ ನೀನು ಆಕಾಶದಿಂದ, ಇದು ಬಾಗಿಲಿರದ  ಕೋಣೆ...
ಸದ್ಯ ಛಾವಣಿ ಇಲ್ಲವಲ್ಲ, ಮುಗಿಲನ್ನಾದರೂ ನೋಡಬಹುದು.
ಚುಕ್ಕಿಗಳೂ ಕಾಣದಷ್ಟು ಕಾರ್ಮೋಡ ಕವಿದ ಮನಸ್ಸು!
ಈಗ ಮಳೆ ಸುರಿದರೆ ಎಷ್ಟು ಚೆನ್ನಾಗಿರುತ್ತೆ! ,
ನೀರ್ತುಂಬಿ ಕೋಣೆಯೊಳಗೆ, ಗೋಡೆಗಳು ಕೊಚ್ಚಿಹೋಗಬಹುದೇ??
ರೆಕ್ಕೆ ಫಡಫಡಿಸಿ ಹಾರಿದ್ದು ಹಕ್ಕಿಯೋ ಬಾವಲಿಯೋ?
ಯೋಚಿಸಿದರೆ ಗೋಚರಿಸಿದ್ದು ಅದು ನನ್ನ ಭಾವಪಕ್ಷಿ.!
ಕುಳಿತಲ್ಲೇ ಕಣ್ಣುಗಳಿಗೆ ಜೊಂಪು ಜೊಂಪು...
ಕನಸುಗಳು ಮಾತಾಡುತ್ತಿವೆ ನನ್ನೊಡನೆ ನಿನ್ನ ಬಗ್ಗೆ!!
ಯಾರೂ ಇರದ ಕೋಣೆಯೊಳಗೆ ಇಬ್ಬರಿದ್ದೇವೆ,
ನಿನ್ನ ಕಾಯುತ್ತ ನಾನೂ, ನನ್ನ ಕನಸು

Thursday, February 2, 2017

ಅಮ್ಮ


ಒಂಭತ್ತು ತಿಂಗಳ ಗರ್ಭವ ನನ್ನಮ್ಮ‌ ಹೆತ್ತಾಗಲಷ್ಟೇ ನಾನು ಪಡೆದುಕೊಂಡದ್ದು ಮಾನವ ರೂಪ..
ದಿನೇ ದಿನೇ ಬೆಳೆದದ್ದು ದೇಹವಷ್ಟೇ ಅಲ್ಲ, ಮನಸ್ಸು ಕೂಡಾ!
ಬಾಲ್ಯದ ನೆನಪುಗಳ ತುಣುಕುಗಳ ಎಷ್ಟೇ ಜೋಡಿಸಿದರೂ -
ನೆನಪಾಗಲೊಲ್ಲದು ನನ್ನಮ್ಮ ನನ್ನ ನೇವರಿಸಿದ್ದು, ಮುತ್ತಿಟ್ಟದ್ದು, ಕೊನೆಗೆ ಹೊಡೆದದ್ದು ಕೂಡಾ!
ನೆನಪು ಭಿತ್ತಿಯ ತುಂಬ
ಅಪ್ಪ-ಅಜ್ಜಿ ಯರ ಚಿತ್ರಗಳದ್ದೇ ಸಂತೆ,
ಅಜ್ಜಿ ಎತ್ತಿಕೊಂಡದ್ದು, ಚಂದಪ ಚಾಮಿ ತೋರಿಸಿ ತುತ್ತುಣಿಸಿದ್ದು,
ಅಪ್ಪ ಅಕ್ಕರೆಯಿಂದ ನೀರೆರೆದು ಅಂಗಿತೊಡಿಸಿ ತಲೆ ಬಾಚಿದ್ದು!
ಅಮ್ಮನ ಜೋಗುಳದ ಧ್ವನಿ ನನಗೆ ನೆನಪಾಗುತ್ತಿಲ್ಲ ಎಂದೂ,
ಅಪ್ಪ ತೊಟ್ಟಿಲು ತೂಗಿದ್ದು ಕತೆ ಹೇಳಿದ್ದು,
ಅಜ್ಜಿಯ ತಬ್ಬಿ ಮಲಗಿದ್ದು ನೆನಪು.
ವಿಷವೂಡಿಸಿದ ಪೂತನಿಗೂ "ಅಮ್ಮ" ಎಂದೇ ಕರೆದನಂತೆ ಕೃಷ್ಣ-
ನಾನೂ ನಿನ್ನ ಕರೆಯಬೇಕು "ಅಮ್ಮಾ" ಎಂದೇ..
ನೀನೆನ್ನ ಅಮ್ಮ ಅನಿಸಿದ್ದು ನನಗೆ ಇಂದೇ.!