Saturday, September 30, 2017

ಕೋರಿಕೆ

ಕೋರಿಕೆ

ನನ್ನಂತರಾಳದ ನೋವುಗಳೇ
ಬೇರು ಬಿಟ್ಟು ಬೆಳೆಯುವಿರೇಕೆ?
ಉಳಿಯಬಾರದೇ ಬೊನ್ಸಾಯಿಗಳಾಗಿ-
ಹೇಳಿ ನೋವುಗಳೇ-
ಮೌನತಾಳುವಿರೇಕೆ?
ಎಲ್ಲಿವೆ ಬಿಕ್ಕುಗಳು?
ಕಣ್ಣೀರ ಹನಿಗಳು!
ಉಳಿದು ಬಿಡಿ ನನ್ನೊಳಗೇ...
ಚಾಚದಿರಿ ಸುತ್ತ ಮುತ್ತ ರೆಂಬೆ-ಕೊಂಬೆ

Tuesday, September 26, 2017

ಮೌನಹಿಮ ಕರಗುವ ಹೊತ್ತು

ಮೌನಹಿಮ ಕರಗುವ ಹೊತ್ತು

ಒಡಹುಟ್ಟಲ್ಲ, ಒಡಲಲ್ಲಿ ಹುಟ್ಟಿಲ್ಲ!
ಒಡನಾಟವಿಲ್ಲ... ಒಡನಾಡಿಯಲ್ಲವೇ ಅಲ್ಲ...
ಮೌನ ಗರ್ಭದಲಿ ಹುಟ್ಟಿ ಬಂತೊಂದು ಬಂಧ...
ಹಿಮಮೌನವ ಕರಗಿ ನೀರಾಗಿಸುತ...
ನೀರೊಮ್ಮೆ ಕುದಿಕುದಿದು ಆವಿಯಾಗಿ... ಮೋಡವಾಗಿ
ಗುಡುಗು ಸಿಡಿಲು ಮಿಂಚುಗಳೊಡನೆ
ಭೋರ್ಗರೆವ ಮಳೆಯಾಗಿ
ಇಳೆಯ ತೋಯಿಸುವುದು...
ಆಕಾಶದ ಹರ್ಷವೆನ್ನುವರು ಕೆಲವರದರ....
ನಾ ಹೇಳಲೇ,
ಇದು ಅದಲ್ಲ...
ಇದು ಅದಲ್ಲವೇ ಅಲ್ಲ...
ಭೂಮಿಯೊಡಲಿಂದ ಆವಿಯಾಗಿ ಹುಟ್ಟಿದ ಮೋಡ
ಅದು ಭೂಮಿಯದೇ ಕಂದ....
ಸುರಿವ ಹನಿಹನಿಯಲ್ಲೂ
ಸಿಟ್ಟು ಸೆಡವು ಆಕ್ರೋಶದ ಕೊನೆಗೆ ಬರುವ ಭಾವೋತ್ಕರ್ಷದ ವರ್ಷ...
ಹಿಮಮೌನವು ಕರಗುವ ಹೊತ್ತು...
ಮಾತೆ ಮಾತು ಮರೆಯುವಳು...
ಕೇಳುವ ಕಿವಿ ಮೈತುಂಬ ತೆರೆದಿಟ್ಟು....

Tuesday, September 19, 2017

ಬರುವುದಾದರೆ ಬಾ


ಬರುವುದಾದರೆ ಬಾ
ತೆರೆದ ಮನಸಿದೆ, ಕನಸು ಸೊಗಸಿದೆ..
ದೂರದಿಂದಲೆ ಮಾತು ಏನದು ಆಡಿದೆ?
ಕಣ್ಣು ಮೌನವ ಮೀರಿದೆ, ಅಂತರಾಳವ ಅರುಹಿದೆ
ಮನವು ಬಿರಿದಿದೆ, ಕಂಪು ಸೂಸಿದೆ
ಹರ್ಷ ಚೆಲ್ಲಿದೆ ಮಲ್ಲಿಗೆ
ನೀಲ ನಭದಲಿ ಚುಕ್ಕಿ ಹೊಳೆದಿದೆ, ನನ್ನ ಆಸೆಯ ಕರೆಯಿದೆ
ಕನಸು ಹಸುರಿದೆ, ಹೃದಯ ಕಾದಿದೆ,
ನಗೆಯ ಹಾಸಿದೆ ಹುಣ್ಣುಮೆ.
ಬಿಂಕ ತೋರದೆ ನೀನು ಬಂದರೆ....
ಸ್ವರ್ಗ ಭೂಮಿಗೆ ಇಳಿಯದೇ!?
ದೂರದಿಂದಲೇ ಮಾತು ಏನದು ಆಡಿದೆ!?