Saturday, June 15, 2019

ಪಯಣ



ನನ್ನ ಹೆಜ್ಜೆಗಳನು ನಾನಿಟ್ಟೇ ಕ್ರಮಿಸಬೇಕು...
ಗಮ್ಯವದು ಸಾವಿರ ಮೈಲುಗಳದ್ದಾದರೂ ಸರಿ,
ಹತ್ತೇ ಹೆಜ್ಜೆಗಳಲಿ ಮುಗಿದರೂ ಸರಿ...
ಹೆಜ್ಜೆಯದು ಭಾರವೆಂದು ಇದ್ದಲ್ಲೇ ಇರುವಂತಿಲ್ಲ,
ಕಲ್ಲು ಮುಳ್ಳುಗಳಿಗೆ ಅಂಜುವಂತಿಲ್ಲ...
ಎಡವಿದರೂ ಸರಿಯೆ,
ಗಾಯ ಮಾಗುವ ಮೊದಲೇ
ಮತ್ತೆ ಪಯಣಿಸಬೇಕು...
ಚುಚ್ಚಿದ ಮುಳ್ಳನ್ನು ಕಿತ್ತು
ಹಿಂತಿರುಗಿ ನೋಡದೇ  ನಡೆಯಬೇಕು...
ಕ್ರಮಿಸಿದ ದಾರಿಗಿಂತ ಮುಂದಿರುವ ದಾರಿಯೇ ಮುಖ್ಯ,
ದೃಢ ಲಕ್ಷ್ಯವೊಂದಿದ್ದರೆ ಸಾಕು,
ದಾಹ ದಣಿವುಗಳ ಅರಿವಾಗುವುದಿಲ್ಲ...
ಹಸಿವು ಕಸುವನು ಕಸಿಯುವುದಿಲ್ಲ...
ಸಾವಿರ ಮೈಲುಗಳ ದೂರ ಹತ್ತೇ ಹೆಜ್ಜೆಯಲಿ ಮುಗಿದಂತೆ ಭಾಸವಾದರೆ ಅದು ಅಚ್ಚರಿಯಲ್ಲ!!!

Wednesday, June 12, 2019

ನೆನಪು - ಚಿತ್ತಾರ

ಯಾರದೋ ಉಸಿರು
ನನ್ನ ಬಸಿರೊಳಗೆ ಕಾಡುತಿಹುದೇಕೆ?
ಇರುಳ ತಮವದು ಹಗಲಲೂ ನುಸುಳಿ ನುಗ್ಗುತಿಹುದೇಕೆ?
ಅರ್ಥವಾಗದ ಮೌನ
ಕಿರುನಗೆಯ ಅಣಕ,
ಸುಡುವುದೀ ಬದುಕ...
ನೆತ್ತಿಗೇರಿದ ಭಾನು;
ಹೊನ್ನಶೂಲದ ಮಾತುಗಳಲ್ಲಿಲ್ಲ ದುಡುಕು!
ಕತ್ತಲೆಯ ಮಬ್ಬು
ಕವಿಯುತಿಹುದಿಲ್ಲಿ,  ಬಾನ ಬಾಂದಳದಲ್ಲಿ....
ಉರಿವ ಸೂರ್ಯಗೆ ಗ್ರಹಣ ಹಿಡಿದಿಹುದು ಮಧ್ಯಾಹ್ನದಲಿ...
ಇಳಿದ ಈ ಸಂಜೆಯಲಿ
ತಾರೆ ಮೂಡದ ಆಗಸವಿದೆ...
ಕತ್ತಲಾವರಿಸಿದೆ
ಬಣ್ಣವಿರದ ಕುಂಚದಲಿ
ಮೋಡ ಚಿತ್ತಾರ ಬಿಡಿಸಿದೆ!