Monday, December 3, 2012

ಮನದ ಮುಂಜಾವು

ಮರೆತು ಹೋದ ಮಧುರ ಗಳಿಗೆ
ಮರಳಿ ಬಂದಿದೆ ಇಲ್ಲಿಗೆ .....
ಹಿಮದ ಹಾದಿಯ ಮುಸುಕು ಸರಿಸಿದ
ಉಷೆಯ ಕಿರಣಕೆ ಮೆಲ್ಲಗೆ ....

ಸರಿದ ಪರದೆಯಾಚೆಗೆನಿತು ಚಂದ
ಭಾವ ಸ್ಫುರಣದ ಹೂರಣ
ಹಿಮಾಚ್ಛಾದಿತ ದಾರಿಯದ್ದಕು
ನಿನ್ನ ನೆನಪಿನ ಸಿಂಚನ

ನಿನ್ನ   ಕಿವಿಯ ಓಲೆ ಕಲ್ಲು
ಚಿಮ್ಮಿ ಮೇಲಕೆ ಹೋಯಿತೇ ?
ಚಂದ್ರನಿಂದ ಕೊಂಚ ದೂರದಿ
ಬೆಳ್ಳಿ ಚುಕ್ಕೆ ಎನಿಸಿತೆ !....

ಹಾದಿ ಬದಿಯಲಿ ನಗುತ ನಿಂತ
ಮುದ್ದು ಮುಖದ ಸುಮಗಳೇ ,
ಅರಳಿ ನಿಂತ ನಿಮ್ಮ ಹೆಸರ
ನನಗೂ ಒಮ್ಮೆ ಹೇಳಿರೆ...

ನನ್ನದಲ್ಲದ ನಿನ್ನೆಗಳ
ಹಿಂದಿರುಗಿ ನೋಡದೇ
ನಡೆವೆ ಮುಂದೆ ಬೆಳಕಿನೆಡೆಗೆ
ಕಲ್ಲುಗಳನು ಎಡವದೇ ...




Friday, January 13, 2012

ಸಂಕ್ರಾಂತಿ ಸಂದೇಶ

ಸಾಧನೆಗಿಂದು ಸೂರ್ಯನೇ ಸ್ಫೂರ್ತಿ
ಆಗಸದೆತ್ತರ ಬೆಳೆಯಲಿ ಕೀರ್ತಿ
ಸಮೃದ್ಧಿಯ ಸಂಕೇತ ಈ ಸಂಕ್ರಾಂತಿ
ನೀಡಲಿ ಜಗಕೆ ಸುಖ ಶಾಂತಿ

ಪ್ರಭೆಯನು ಬೀರುತ
ಹೊರಟಿಹ ಸೂರ್ಯ ; ಉತ್ತರದೆಡೆಗೆ --
ಹಾರೈಸುವೆ ಸತತ
ಸುಖ ಸಂತೋಷವ ನಿಮಗೆ--

ನಿಲ್ಲಲಿ ದ್ವೇಷ ಅಸೂಯೇಯಾಕ್ರಮಣ
ನಡೆಯಲಿ ಸ್ನೇಹ ಸುಧಾಲಿಂಗನ ....
ಸಾಧನೆ ಎಂಬುದು ಮುಗಿಯದ ಪಯಣ
ಶುಭವನ್ನು ತರಲಿ ಮಕರ ಸಂಕ್ರಮಣ .

























Monday, January 9, 2012

ಊರ್ಮಿಳೆಯ ಮೂಕ ಗೀತೆ

ಹಳದಿ ಹೂವ ಮರವೇ ಹೇಳು
ಎಂದು ಬರುವ ಲಕ್ಷ್ಮಣ ?
ಹತ್ತರೊಡನೆ ನಾಲ್ಕು ಚೈತ್ರ
ಯುಗವು ಒಂದು ಪ್ರತಿ ಕ್ಷಣ!

ಪರ್ಣಕುಟಿಯ ಕದವ ತಟ್ಟಿ
ಬರುವನೆಂದು ನನ್ನವ?
ಹೇಳು ಸರಯೂ ತಾಳಲಾರೆ
ಇನಿಯನಿರದೆ ವಿರಹವ....

ಅಡವಿಯಲ್ಲಿ ಯಾವ ಮಾಯೆ
ನಲ್ಲ ನಿನ್ನ ಸೆಳೆಯಿತೋ!
ಎಲ್ಲಿ ಮಾರಿ ಕಣ್ಣು ತಗುಲಿ
ನಿನ್ನ ದೇಹ ಸೊರಗಿತೋ......

ಬಲ್ಲೆ ನಾನು ಬರುವನವನು
ಹೃದಯ ಅವನ ಕಾದಿದೆ
ಮುತ್ತನೆಲ್ಲ ಏಣಿಸುತಿರುವೆ
ಕೆನ್ನೆ ಇನ್ನೂ ಹಸಿಯಿದೆ .....