Monday, November 21, 2016

ಅವನ ಪ್ರೇಮದ ಹಾಗೆ! (೨೦೦೧ ರ ಕವನ)

ಟಪ್ ಟಪ್ ಟಪ್.......
 ಹನಿಮಳೆ,
ಅವನ ಪ್ರೇಮದ ಹಾಗೆ!
ಅಲ್ಲಿ ಭೋರ್ಗರೆತ,‌ ಆವೇಶ ಇಲ್ಲ.
ಬರಿಯ ಮಣ್ಣ ವಾಸನೆಗೆ
ಮೂಗರಳಿಸಿ ಆಸ್ಸುವಾದಿಸುವ‌ ನಿರಾಳತೆ....

ಸಂಪಿಗೆ ಮರದೆಲೆಗಳ ಮಾತ್ರ ಅಲುಗಾಡಿಸಿದೆ....
ಮೆಲುಗಾಳಿ,
ಅವನ ಪ್ರೇಮದ ಹಾಗೆ!
ರೆಂಬೆ ಕೊಂಬೆ‌ ಕಾಂಡವನ್ನೇ ಕುಲುಕಿ
ಅಸ್ತಿತ್ವವ ಮರೆಸುವುದಿಲ್ಲ
ತೇಲಿಬಂದ ಸಂಪಿಗೆಯ ಕಂಪಿನಲಿ
ಅವನ ಪ್ರೇಮ ಗಾಢವಾದಂತೆ.....

ಕುಹೂ...ಕುಹೂ...ಕುಹೂ....
ಚೈತ್ರದಲಿ ಕೋಗಿಲೆಯುಲಿತ
ಅವನ ಪ್ರೇಮದ ಹಾಗೆ!
ಕಾರ್ಖಾನೆಯ ಸೈರನ್ನಿನ ಕೂ.....ವಿನ
ಪರಿಯಲಿ ಬೆಚ್ಚಿ ಬೀಳಿಸುವುದಿಲ್ಲ...
ಜೋಗುಳ ಹಾಡಿನ ಕೊನೆಯ ಸಾಲಿನ
ಜೋ....ಜೋ.....ಜೋ...


Saturday, November 12, 2016

ರಾಧೆಯ ಸ್ವಗತ
ಅದೇ ಯಮುನೆ‌ ಅದೇ ಕೊಳಲು
ಇಂದು ಮೌನ ತಳೆದಿವೆ.
ಮನದ ನೋವು,ಬಯಕೆ ಕಾವು
ಹೃದಯ ಅವನ ‌ಕಾದಿದೆ.

ತುಳಸೀ ಮಾಲೆ - ಗೋವು ಶಾಲೆ
ಕನ್ನನಿರದೆ ಸೊರಗಿದೆ
ಮಧುರ ಗೀತ - ರಾಸ ಕುಣಿತ
ಎಲ್ಲ‌‌ ಸ್ಥಬ್ದವಾಗಿದೆ

ಬಂದೇ ಬರುವೆನೆಂದ ವಚನ
ಮನದಿ ನಿತ್ಯ ಧ್ವನಿಸಿದೆ
"ನಾನೇ ನೀನು , ನಿನ್ನಲಿರುವೆ"
ಬರಿಯ ನೆನಪು ಉಳಿಯಿತೇ!?
~~~~~~~
ಸಂಧ್ಯಾ ಕಾನತ್ತೂರು.